ಪ್ರಾಂಬಣಮ್ -
	ಮಧ್ಯಜಾವದಲ್ಲಿ ಹಿಂದೂ ಮತ್ತು ಬೌದ್ಧ ದೇವಾಲಯಗಳ ಸಮೂಹಗಳು ಇರುವ ಖ್ಯಾತ ವಾಸ್ತುಶಿಲ್ಪ ಪ್ರದೇಶ. ಬೋರಬದೂರನ್ನು ಬಿಟ್ಟರೆ ಇಷ್ಟೊಂದು ಸುಂದರವಾದ ದೇವಾಲಯಗಳು ಇರುವುದು ಇಲ್ಲಿಯೇ. ಈ ದೇವಾಲಯಗಳಲ್ಲಿ ಗುಪ್ತರ, ಪಲ್ಲವರ, ಚಾಳುಕ್ಯರ ವಾಸ್ತುಶಿಲ್ಪ ಶೈಲಿಯ ಪ್ರಭಾವವಿದೆಯೆಂದು ಹೇಳಲಾಗಿದೆ. ಹಿಂದೆ ಇದು ಅನೇಕ ರಾಜಮನೆತನಗಳ ರಾಜಧಾನಿ ಆಗಿದ್ದಿತು. ಪ್ರಸಿದ್ಧವೆನಿಸಿರುವ ಇಲ್ಲಿಯ ದೇವಾಲಯಗಳಲ್ಲಿ ಚಂಡಿಕಲಶನ್, ಚಂಡಿಸಾರಿ, ಚಂಡಿಸೇವು, ಲೋರ ಜೊಂಗ್ರಾಂಗ್ ಮುಖ್ಯವಾದವು. ಕ್ರಿ.ಶ. 778ರ ಶಾಸನವನ್ನು ಹೊಂದಿರುವ ಚಂಡಿಕಲಶನ್ ದೇವಾಲಯ ಬೌದ್ಧಧರ್ಮಕ್ಕೆ ಸೇರಿದ್ದು ತಾರಾದೇವತೆಗೋಸ್ಕರ ಕಟ್ಟಲಾಗಿದೆ. ದೇವಾಲಯ ಚಚ್ಚೌಕವಾಗಿದೆ. ನಾಲ್ಕು ಕಡೆಗಳಲ್ಲಿಯೂ ಮುಂಚಾಚಿರುವ ಗೂಡುಗಳಿದ್ದು ಅಲಂಕಾರ ಪ್ರಧಾನವಾಗಿದೆ. ದೇವಾಲಯದ ಬಾಗಿಲುವಾಡಗಳ ಮತ್ತು ಗೂಡುಗಳ ಸುತ್ತಲೂ ವಿವಿಧ ಕೆತ್ತನೆಗಳಿವೆ. ಪ್ರತಿಯೊಂದು ಗೂಡಿನ ಮೇಲ್ಭಾಗದ ಮಧ್ಯದಲ್ಲಿ ಕಾಲನ ಶಿರವಿದೆ. ಈ ದೇವಾಲಯ ಮೊದಲ ನೋಟಕ್ಕೆ ಗುಪ್ತರ ಶಿಲ್ಪಶೈಲಿಯನ್ನು ನೆನಪಿಗೆ ತರುತ್ತದೆ. ಚಂಡಿಸಾರ ದೇವಾಲಯ ಚಂಡಿಕಲಶನ್‍ಗಿಂತ ಸ್ವಲ್ಪ ಭಿನ್ನರೀತಿಯಲ್ಲಿದೆ. ಚತುರಸ್ರಾಕಾರದ ಎರಡು ಹಂತದ ಈ ಕಟ್ಟಡದ ಮೇಲೆ ಸ್ತೂಪಾಕಾರದ ಶಿಖರಗಳಿವೆ. ಹೊರಗಿನಿಂದ ನೋಡಿದರೆ ಮೂರು ಹಂತಗಳ ಕಟ್ಟಡವೆಂಬಂತೆ ಕಾಣುತ್ತದೆ.

	ಚಂಡಿಸೇವು ಬಹಳ ಭವ್ಯವಾದ ಮತ್ತು ವಿಶಾಲವಾದ ಬೌದ್ಧ ದೇವಾಲಯ. ಪ್ರಾಮುಖ್ಯ ಮತ್ತು ಪರಿಮಾಣಗಳಲ್ಲಿ ಇದು ಬೋರಬದೂರಿನ ಆಲಯಕ್ಕೆ ಎರಡನೆಯದು. ಈ ದೇವಾಲಯದಲ್ಲಿ ಐದು ಗರ್ಭಗೃಹಗಳಿವೆ. ಮಧ್ಯದಲ್ಲಿರುವ ಮುಖ್ಯ ಗರ್ಭಗೃಹದಲ್ಲಿ ವಿರೋಚನ ಧ್ಯಾನಿಬುದ್ಧನೂ ಉಳಿದ ನಾಲ್ಕು ಮೂಲೆಗಳಲ್ಲಿರುವ ಗರ್ಭಗೃಹದಲ್ಲಿ ಇತರೆ ಧ್ಯಾನಿಬುದ್ಧಗಳೂ ಇದ್ದಾರೆ. ಈ ದೇವಾಲಯಕ್ಕೆ ನಾಲ್ಕು ದಿಕ್ಕಿನಲ್ಲೂ ನಾಲ್ಕು ಪ್ರವೇಶ ದ್ವಾರಗಳಿವೆ. ಗರ್ಭಗೃಹಗಳು ಚತುರಸ್ರಾಕಾರವಾಗಿದ್ದು ಘಂಟಾಕೃತಿಯ ಶಿಖರಗಳನ್ನು ಹೊಂದಿರುವುದಲ್ಲದೆ ನಾಲ್ಕು ದಿಕ್ಕಿನಲ್ಲೂ ಸಣ್ಣ ಪ್ರಮಾಣದ 240 ಸಣ್ಣ ದೇವಾಲಯಗಳಿವೆ. ಇವು ಕೂಡ ದೊಡ್ಡ ಗರ್ಭಗೃಹಗಳ ಆಕೃತಿಯಲ್ಲಿಯೇ ಇದ್ದು, ಇಡೀ ಆವರಣಕ್ಕೆ ಭವ್ಯತೆಯನ್ನು ತಂದಿವೆ. ಈ ದೇವಾಲಯದ ಒಟ್ಟು ಉದ್ದ ಸುಮಾರು 180 ಮೀ. ಅಗಲ ಸುಮಾರು 165 ಮೀ. ಸುತ್ತಲಿನ ದೇವಾಲಯಗಳು ಸ್ವಲ್ಪ ತಗ್ಗಿನಲ್ಲೂ, ಮಧ್ಯದ ದೇವಾಲಯಗಳು ಸ್ಪಲ್ಪ ಎತ್ತರದಲ್ಲಿಯೂ ಇರುವುದರಿಂದ, ಇಡೀ ಕಟ್ಟಡ ಒಂದೇ ದೇವಾಲಯದಂತೆ ಕಾಣುವುದು ಇಲ್ಲಿಯ ವೈಶಿಷ್ಟ್ಯ. ಈ ದೃಷ್ಟಿಯಿಂದ ಇದು ಬೋರಬದೂರಿನ ದೇವಾಲಯದಷ್ಟು ದೊಡ್ಡದಲ್ಲವಾದರೂ, ಅದೇ ಶೈಲಿಯ ಆಲಯವಾಗಿದ್ದು ಖ್ಯಾತಿ ಗಳಿಸಿದೆ.

	ಲೋರಜೊಂಗ್ರಾಂಗ್ ಜಾವಾದಲ್ಲಿಯೇ ಅತ್ಯಂತ ಶ್ರೇಷ್ಠವಾದ ಹಿಂದೂ ದೇವಾಲಯಗಳ ಸಮೂಹವೆನಿಸಿದೆ. ಕ್ರಿ.ಶ. 9ನೆಯ ಶತಮಾನದ ಉತ್ತರಾರ್ಧದಲ್ಲಿ ನಿರ್ಮಿತವಾಗಿರುವ ಇಲ್ಲಿಯ ದೇವಾಲಯಗಳು ಮಧ್ಯ ಜಾವಾ ವಾಸ್ತುಶಿಲ್ಪ ಶೈಲಿಯ ಕೊನೆಯ ಹಂತವನ್ನು ಸೂಚಿಸುತ್ತವೆ. ಸುತ್ತಲೂ ಇತರ ಸಣ್ಣ ದೇವಾಲಯಗಳಿದ್ದು ಮಧ್ಯದಲ್ಲಿ ಅವುಗಳಿಗಿಂತ ಎತ್ತರವಾದ ಶಿವದೇವಾಲಯವಿದೆ. ಇದರ ಎಡ ಮತ್ತು ಬಲಭಾಗಗಳಲ್ಲಿ ವಿಷ್ಣು ಮತ್ತು ಬ್ರಹ್ಮನ ದೇವಾಲಯಗಳಿವೆ. ಈಶ್ವರನ ದೇವಾಲಯದ ಮುಂದೆ ಸಣ್ಣ ಪ್ರಮಾಣದ ನಂದಿ ದೇವಾಲಯವೂ ಬ್ರಹ್ಮನ ದೇವಾಲಯದ ಮುಂದೆ ಗಣೇಶನ ದೇವಾಲಯವೂ ವಿಷ್ಣುದೇವಾಲಯದ ಮುಂದೆ ಅಗಸ್ತ್ಯನ ದೇವಾಲಯವೂ ಇವೆ. ಇವಿಷ್ಟನ್ನೂ ಒಳಗೊಂಡಂತೆ ಸುತ್ತಲೂ ಸುಮಾರು 110 ಮೀ. ಉದ್ದದ ಚೌಕಾಕಾರದ ಗೋಡೆಯಿದೆ. ನಾಲ್ಕು ಕಡೆಗಳಲ್ಲಿಯೂ ಮಧ್ಯದಲ್ಲಿ ಬಾಗಿಲು ಗೋಪುರಗಳಿವೆ. ಈ ಗೋಡೆಯ ಹೊರವಲಯದಲ್ಲಿ ವಿಶಾಲವಾದ ಅಂಗಳವಿದ್ದು ಇದರ ತುದಿಯಲ್ಲಿ ಸು. 219ಮೀ. ಉದ್ದದ ಗೋಡೆಗಳಿವೆ. ಈ ಎರಡು ಗೋಡೆಗಳ ಮಧ್ಯದಲ್ಲಿ 284 ದೇವಾಲಯಗಳಿದ್ದು ಇವು ಸಣ್ಣ ಸಣ್ಣ ದೇವಾಲಯಗಳಾದರೂ ಸುಂದರವಾಗಿವೆ. ಇವೆಲ್ಲವನ್ನೂ ಹೊರವಲಯದಿಂದ ಬೇರ್ಪಡಿಸುವುದಕ್ಕೊಸ್ಕರ ನಾಲ್ಕೂಕಡೆ ಸು. 390 ಮೀ. ಉದ್ದದ ಗೋಡೆ ಇದೆ. ಇಲ್ಲಿರುವ ಮುಖ್ಯವಾದ ಶಿವ ದೇವಾಲಯ ಸು. 30 ಮೀ. ಚಚ್ಚೌಕವಾದ ಮತ್ತು ಸು. 47 ಮೀ. ಎತ್ತರದ ಶಿಖರವನ್ನು ಹೊಂದಿದೆ. ಗೂಡುಗಳಲ್ಲಿ ಮಹಾಕಾಲ, ನಂದಿ, ಗಣೇಶ, ದುರ್ಗಾ, ಅಗಸ್ತ್ಯ ಮುಂತಾದ ದೇವತೆಗಳ ಶಿಲ್ಪಗಳಿವೆ. ಮುಖ್ಯವಾಗಿ ಗಮನ ಸೆಳೆಯುವ ಶಿಲ್ಪವೆಂದರೆ ಗೋಡೆಯಲ್ಲಿರುವ ಶಿಲ್ಪಫಲಕಗಳಲ್ಲಿ ರೂಪುಗೊಂಡಿರುವ ಮೂವತ್ತೆರಡು ವಿವಿಧ ಭಂಗಿಯ ಈಶ್ವರನ ತಾಂಡವನೃತ್ಯ. ಒಂದೇ ಶಿಲ್ಪ ಫಲಕದಲ್ಲಿ ಇಷ್ಟೊಂದು ತಾಂಡವನೃತ್ಯ ಭಂಗಿಗಳಿರುವುದು ಇಲ್ಲಿ ಮಾತ್ರ. ಪಕ್ಕದ ಗೋಡೆಗಳಲ್ಲಿ ರಾಮಾಯಣದ ಕಥೆ ಅರೆ ಉಬ್ಬುಶಿಲ್ಪಗಳಲ್ಲಿ ಚಿತ್ರಿತವಾಗಿದೆ. ಈ ಎಲ್ಲ ವಾಸ್ತುಶಿಲ್ಪ ಕೃತಿಗಳಿಂದ ಈ ಪ್ರದೇಶ ಜಾವದಲ್ಲಿ ಮಾತ್ರವಲ್ಲ ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿಯೆ ಮಹತ್ತರವಾದ ಸ್ಥಾನಗಳಿಸಿದೆ.
(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ